ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ತರಾತುರಿಯಲ್ಲಿ ಎಫ್‌ಐಆರ್ ದಾಖಲಿಸುವುದು ಮತ್ತು ಯೋಚಿಸದೆ ಬಂಧನಕ್ಕೊಳಪಡಿಸುವ ಪ್ರಕ್ರಿಯೆ ವಿರುದ್ಧ ಕರ್ನಾಟಕ ಹೈಕೋರ್ಟ್ ಗರಂ ಆಗಿದೆ. ಇಂತಹ ಅನಗತ್ಯ ಕ್ರಮಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಗೆ ಮಹತ್ವದ 5 ಅಂಶಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಇದನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಹೈಕೋರ್ಟ್ ಸೂಚಿಸಿದೆ. ಒಂದು ಪೋಸ್ಟ್ ಗೆ ಸಂಬಂಧಿಸಿದಂತೆ ಪೊಲೀಸರು ಒಂದೇ ದಿನ ಏಳು ಎಫ್‌ಐಆರ್ ದಾಖಲಿಸಿದ್ದನ್ನು ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಯಾರ ಮೇಲಾದರೂ ಅಪರಾಧ ಪ್ರಕರಣ ದಾಖಲಾದ ಬೆನ್ನಲ್ಲೇ ಯಾವುದೇ ಮುನ್ಸೂಚನೆ ಅಥವಾ ಸಮರ್ಪಕ ತನಿಖೆ ಇಲ್ಲದೆ ಬಂಧನ ನಡೆಯಬಾರದು. ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ವಿಚಾರದಲ್ಲಿ ದೂರು ಸರಿಯಾಗಿ ಪರಿಶೀಲನೆಯಾಗದೆ ಬಂಧಿಸುವುದು ಮತ್ತು ಎಫ್‌ಐಆರ್ ಹಾಕುವುದನ್ನು ತಡೆಯಲು ಈ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಪೊಲೀಸ್ ಇಲಾಖೆಗೆ ಸ್ಪಷ್ಟಪಡಿಸಿದ್ದಾರೆ.
ಯಾವ ಪ್ರಕರಣದ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿ?
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆ ಎಂಬಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ ಫಾಲೋ ಮಾಡಿದ ಆರೋಪದ ಮೇಲೆ ಆರು ಮಂದಿ ಯುವಕರನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಸುದ್ದಿಯನ್ನು 'ಕರ್ನಾಟಕ ಪೋರ್ಟ್‌ಫೋಲಿಯೋ' ಎನ್ನುವ ಎಕ್ಸ್ (ಟ್ವಿಟರ್) ಖಾತೆ ರಿಪೋಸ್ಟ್ ಮಾಡಿತ್ತು. ಈ ಕಾರಣಕ್ಕಾಗಿ ಸದರಿ ಹ್ಯಾಂಡಲ್‌ನ ಅಡ್ಮಿನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಪ್ರತಿವಾದಿಗಳು, "ಈ ಖಾತೆಯು ಸುಳ್ಳು ಮಾಹಿತಿಯನ್ನು ಹರಡುತ್ತಾ ಕೋಮುದ್ವೇಷಕ್ಕೆ ಕಾರಣವಾಗುತ್ತಿದೆ" ಎಂದು ಆರೋಪಿಸಿ ಬಿಎನ್‌ಎಸ್ ಸೆಕ್ಷನ್ 353(2) ರಡಿ ದೂರು ದಾಖಲಿಸಿದ್ದರು. ಆದರೆ, ಈ ದೂರಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಗಳಿಲ್ಲ ಮತ್ತು ದುರುದ್ದೇಶ ಸಾಬೀತಾಗಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಎಫ್‌ಐಆರ್ ಅನ್ನು ರದ್ದುಗೊಳಿಸಿತು.
ಈ ಕೇಸಿನ ವಿಚಾರಣೆ ವೇಳೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಈ ಮಾರ್ಗಸೂಚಿಯನ್ನು ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸುತ್ತೋಲೆಯ ಮೂಲಕ ತಲುಪಿಸಬೇಕು ಎಂದು ಆದೇಶಿಸಿದೆ.
ಪೊಲೀಸ್ ಇಲಾಖೆಗೆ ಕರ್ನಾಟಕ ಹೈಕೋರ್ಟ್ ನೀಡಿರುವ 5 ಮಾರ್ಗಸೂಚಿಗಳು: ಸುಪ್ರೀಂಕೋರ್ಟ್‌ನ ಸತೇಂದರ್ ಕುಮಾರ್ ಅಂಟಿಲ್ ಮತ್ತು ತೆಲಂಗಾಣ ಹೈಕೋರ್ಟಿನ ಬಾಲು ಪ್ರಕರಣದ ತೀರ್ಪುಗಳನ್ನು ಉಲ್ಲೇಖಿಸಿ ಹೈಕೋರ್ಟ್ ಈ ಕೆಳಗಿನ ಐದು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಅಪರಾಧದ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸುವುದು:
ಆರೋಪ ಎದುರಾದ ಕೂಡಲೇ ಯಾವುದೇ ತರಾತುರಿಯ ಕ್ರಮಕ್ಕೆ ಮುಂದಾಗದೆ, ಮೊದಲು ದೂರನ್ನು ಮೇಲ್ನೋಟಕ್ಕೆ ಪರಿಶೀಲಿಸಬೇಕು. ದೂರಿನಲ್ಲಿ ನಿಜಕ್ಕೂ ಆರೋಪಿತ ಅಪರಾಧದ ಅಂಶಗಳಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಶಿಕ್ಷಾರ್ಹ ಕಾಯಿದೆಯ ನಿಯಮಗಳನ್ನು ಯಾಂತ್ರಿಕವಾಗಿ ನಕಲು ಮಾಡಬಾರದು.
ಸತತ ಎಫ್‌ಐಆರ್‌ಗಳನ್ನು ಪರಿಶೀಲಿಸುವುದು:
ಒಂದೇ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾದರೂ ದೂರು ದಾಖಲಾಗಿದ್ದರೆ, ಮತ್ತೊಂದು ಹೊಸ ಎಫ್‌ಐಆರ್ ದಾಖಲಿಸಬಾರದು. ದೂರುದಾರರು ಬೇರೆಯವರಾಗಿದ್ದರೂ ಸಹ ಒಂದೇ ವಿಷಯಕ್ಕೆ ಮರು ಎಫ್‌ಐಆರ್ ದಾಖಲಿಸಲು ಅವಕಾಶವಿಲ್ಲ.
ಮೊದಲು ಪ್ರಾಥಮಿಕ ತನಿಖೆ ನಡೆಸುವುದು:
ಯಾವುದೇ ಬಂಧನ ಅಥವಾ ಎಫ್‌ಐಆರ್ ದಾಖಲಿಸುವ ಮುನ್ನ ಬಿಎನ್‌ಎಸ್‌ಎಸ್ ಸೆಕ್ಷನ್ 173(3) ಅಡಿಯಲ್ಲಿ ಅವಕಾಶವಿರುವ ಕಡೆಗಳಲ್ಲಿ ಪ್ರಾಥಮಿಕ ತನಿಖೆ ನಡೆಸುವುದಕ್ಕೆ ಪ್ರಥಮ ಆದ್ಯತೆ ನೀಡಬೇಕು.
ಕೇವಲ ಟೀಕೆಗಳು ಬಂಧನ ಅಥವಾ ಎಫ್‌ಐಆರ್‌ಗೆ ಕಾರಣವಾಗಬಾರದು: ಬಿಎನ್‌ಎಸ್ ಸೆಕ್ಷನ್ 353(2) ಅನ್ವಯವಾಗುವಂತೆ ಪೋಸ್ಟಿನ ನೈಜ ಉದ್ದೇಶ ಸೇರಿದಂತೆ ನಿರ್ದಿಷ್ಟ ಅಂಶಗಳನ್ನು ಗಂಭೀರವಾಗಿ ಪರಿಶೀಲಿಸಬೇಕು. ಸರ್ಕಾರದ ಅಥವಾ ವ್ಯಕ್ತಿಗಳ ಬಗೆಗಿನ ಕೇವಲ ಟೀಕೆ-ಟಿಪ್ಪಣಿಗಳನ್ನು ಈ ಕಾಯಿದೆಯಡಿಯಲ್ಲಿ ತರಬಾರದು. ಇದರೊಂದಿಗೆ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಪೂರ್ಣ ರಕ್ಷಣೆ ಸಿಗಬೇಕು.
ಮೊದಲು ನೋಟಿಸ್ ನೀಡಿ ವಿಚಾರಣೆ ನಡೆಸುವುದು:
ಬಿಎನ್‌ಎಸ್ ಸೆಕ್ಷನ್ 35 ಹಾಗೂ ಅರ್ನೇಶ್ ಕುಮಾರ್ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಬಂಧನದ ಅಗತ್ಯವಿಲ್ಲದಿರುವ ಸಂದರ್ಭಗಳಲ್ಲಿ ಸೆಕ್ಷನ್ 35(3)ರಡಿ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು. ಕೇವಲ ಎಫ್‌ಐಆರ್ ದಾಖಲಾದಾಕ್ಷಣ ಯಾರನ್ನೂ ಮನಬಂದಂತೆ ಬಂಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



