ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಅರದೇಶನಹಳ್ಳಿ ಗ್ರಾಮದ ಶ್ರೀ ಬಗಳಮುಖಿ ದೇವಾಲಯದಲ್ಲಿ ನವರಾತ್ರಿಯ ವಿಶೇಷ ಆಚರಣೆ ನಡೆಯಿತು.ಈ ವೇಳೆ ವಿಜಯದಶಮಿಯಂದು 48 ಮುತೈದೆಯರಿಗೆ ಬಾಗಿನ ನೀಡುವ ಮೂಲಕ ದೇವಿಯನ್ನು ಆರಾಧನೆ ಮಾಡಲಾಯಿತು ಎಂದು ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಮಣಿ ತಿಳಿಸಿದರು.
ವಿಜಯ ದಶಮಿ ಪ್ರಯುಕ್ತ ಚಾಮುಂಡೇಶ್ವರಿ, ಬಗಳಮುಖಿ ಹಾಗೂ ಯಲ್ಲಮ್ಮ ದೇವಿಯರಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಸಲ್ಲಿಸಿ ಬೆಳಗಿನಿಂದಲ್ಲೇ ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯ ಮೆರವಣಿಗೆ ಮಾಡುವ ಮೂಲಕ ತೆರಳಿ ಬನ್ನಿ ಕಡಿಯುವ ಮೂಲಕ ಇಂದಿನ ದಿನವನ್ನು ಭಕ್ತಿಪೂರ್ಣವಾಗಿ ಆಚರಣೆ ಮಾಡಲಾಗಿದೆ ಎಂದು ತಿಳಿಸಿದರು.
ನಿರಂತರ 13 ವರ್ಷಗಳಿಂದ ಈ ಆಚರಣೆ ನಿರಂತರವಾಗಿ ನಡೆಯುತ್ತಿದ್ದು, ದೇವಿಯ ಸ್ವರೂಪರಾದ ಮಹಿಳೆಯರಿಗೆ ಅರಿಶಿನ ಕುಂಕುಮ ಸೀರೆ, ಕುಪ್ಪಸ, ಬಳೆ, ಹಣ್ಣು, ಎಲೆ ಅಡಿಕೆ ಉಡುಗೊರೆ ಸೇರಿದಂತೆ ಹಲವು ಪದಾರ್ಥಗಳನ್ನೊಳಗೊಂಡ ಬಾಗಿನವನ್ನು ಅರ್ಪಿಸಿ ದೇವಿ ಆರಾಧನೆ ಮಾಡಲಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಯುಕ್ತ ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ನಡೆಸಲಾಯಿತು.ಅಪಾರ ಸಂಖ್ಯೆಯಲ್ಲಿ ಭಕ್ತರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಆಗಮಿಸಿ ಭಕ್ತಿಯಿಂದ ದೇವಿಯ ದರ್ಶನ ಪಡೆದರು.



