ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಗರದ ಪುಲಕೇಶಿನಗರದ ಜೆರ್ಮಿಆ ರಸ್ತೆಯಲ್ಲಿರುವ ನಿರ್ಮಾಣ ಹಂತದ ಏಳು ಅಂತಸ್ತಿನ ಕಟ್ಟಡದ 5ನೇ ಮಹಡಿಯಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಶಂಕಾಸ್ಪದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ತನಿಖೆಯನ್ನು ತೀವ್ರಗೊಳಿಸಿವೆ.
ಅನಾಮಧೇಯ ವ್ಯಕ್ತಿಯೊಬ್ಬ ಕಳುಹಿಸಿದ್ದ ಬ್ಯಾಟರಿ ಮಾದರಿಯ ಪಾರ್ಸೆಲ್ ತೆರೆಯುತ್ತಿದ್ದಂತೆ ಸಂಭವಿಸಿದ ಈ ಸ್ಫೋಟದಲ್ಲಿ ಕಾವಲುಗಾರ ಅಲ್ಲಾವುದ್ದೀನ್ ಹಾಗೂ ಪೇಂಟರ್ ಸೂರಜ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಿಂದ ವೈರ್, ಟೈಮರ್ ಹಾಗೂ ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ಸುಧಾರಿತ ಸ್ಫೋಟಕ ಬಾಂಬ್ ಆಗಿರಬಹುದು ಎಂಬ ಪ್ರಬಲ ಶಂಕೆ ವ್ಯಕ್ತವಾಗಿದೆ. ಅಧಿಕೃತ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ರಾಮಮೂರ್ತಿನಗರದ ಉದ್ಯಮಿಯೊಬ್ಬರಿಗೆ ಸೇರಿದ ಈ ಕಟ್ಟಡದ ಮೊದಲ ಎರಡು ಮಹಡಿಗಳಲ್ಲಿ ವಾಣಿಜ್ಯ ಮಳಿಗೆಗಳಿದ್ದು, ಉಳಿದ ಮಹಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಕ್ಟೋಬರ್ 20ರ ಮಂಗಳವಾರ ಮಧ್ಯಾಹ್ನ 1:30ರ ಸುಮಾರಿಗೆ ಕಾವಲುಗಾರ ಅಲ್ಲಾವುದ್ದೀನ್ಗೆ ಬಂದ ಅನಾಮಧೇಯ ಫೋನ್ ಕರೆಯಲ್ಲಿ ಪಾರ್ಸೆಲ್ ಬಂದಿರುವುದಾಗಿ ತಿಳಿಸಲಾಗಿತ್ತು. ಬ್ಯಾಟರಿ ಮಾದರಿಯಲ್ಲಿದ್ದ ಆ ಪಾರ್ಸೆಲ್ ಪಡೆದ ಅಲ್ಲಾವುದ್ದೀನ್, 7ನೇ ಮಹಡಿಯಲ್ಲಿದ್ದ ಪೇಂಟರ್ ಸೂರಜ್ ಕುಮಾರ್ ಅವರನ್ನು 5ನೇ ಮಹಡಿಗೆ ಕರೆದು ಅದನ್ನು ತೆರೆಯುವಂತೆ ಸೂಚಿಸಿದ್ದರು. ಸೂರಜ್ ಅದನ್ನು ಬಿಚ್ಚಿ ಸ್ವಿಚ್ ಆನ್ ಮಾಡುತ್ತಿದ್ದಂತೆ ತೀವ್ರ ಸ್ಫೋಟ ಸಂಭವಿಸಿದೆ.
ಘಟನೆಯಲ್ಲಿ ಸೂರಜ್ ಅವರ ಬಾಯಿ ಹಾಗೂ ಕೈಗಳಿಗೆ ಗಾಯಗಳಾಗಿದ್ದರೆ, ಕಾವಲುಗಾರ ಅಲ್ಲಾವುದ್ದೀನ್ ಕೈ ಸೇರಿದಂತೆ ದೇಹದ ಇತರ ಭಾಗಗಳಿಗೆ ಸುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳೀಯರ ನೆರವಿನಿಂದ ಇಬ್ಬರನ್ನೂ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ತನಿಖಾ ಸಂಸ್ಥೆಗಳ ಬಿಗಿ ತರಾಟೆ: ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೂರ್ವ ವಿಭಾಗದ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆಹಾಕಿ, ಸ್ಫೋಟದ ಸ್ಥಳದಲ್ಲಿದ್ದ ಟೈಮರ್, ವೈರ್ ಹಾಗೂ ಬ್ಯಾಟರಿಗಳನ್ನು ವಶಕ್ಕೆ ಪಡೆದು ಎಫ್ಎಸ್ಎಲ್ ತನಿಖೆಗೆ ಕಳುಹಿಸಿಕೊಟ್ಟಿದ್ದಾರೆ. ಈ ನಡುವೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಆಕಸ್ಮಿಕವಾಗಿ ಸಂಭವಿಸಿದೆಯೇ ಅಥವಾ ಯಾವುದೇ ವಿಧ್ವಂಸಕ ಕೃತ್ಯವೆಸಗಲು ನಡೆಸಿದ ಸಿದ್ಧತೆಯೇ ಎಂಬ ಕೋನದಲ್ಲಿ ತನಿಖೆ ಮುಂದುವರಿದಿದೆ.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಾದ ಅಸ್ಸೋಂ ಮೂಲದ ಕಾವಲುಗಾರ ಅಲ್ಲಾವುದ್ದೀನ್ (ಕಳೆದ ಎರಡು ವಾರಗಳಿಂದ ಕೆಲಸ ಮಾಡುತ್ತಿದ್ದವರು) ಹಾಗೂ ಉತ್ತರ ಪ್ರದೇಶ ಮೂಲದ ಪೇಂಟರ್ ಸೂರಜ್ ಕುಮಾರ್ (ಇವರ ಸಹೋದರ ಅಭಿಕುಮಾರ್ ಬಾಬುಸಾಪಾಳ್ಯದಲ್ಲಿ ವಾಸವಿದ್ದು, ಇಬ್ಬರು ಎರಡು ದಿನಗಳಿಂದ ಕೆಲಸಕ್ಕೆ ಬಂದಿದ್ದರು) ನೀಡಿದ ಹೇಳಿಕೆಗಳು ಗೊಂದಲಮಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಸಕರ ಭೇಟಿ ಹಾಗೂ ಕ್ರಮದ ಎಚ್ಚರಿಕೆ:
ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ಎ.ಸಿ. ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಮಾತನಾಡಿದ ಅವರು, ಐಇಡಿ ಸ್ಫೋಟಗೊಂಡಿರುವ ಬಗ್ಗೆ ಶಂಕೆ ಇದ್ದು, ಎಫ್ಎಸ್ಎಲ್ ವರದಿ ಬಂದ ನಂತರವೇ ಸತ್ಯಾಂಶ ಹೊರಬರಲಿದೆ ಎಂದರು.
ಅಲ್ಲದೆ, ಸದರಿ ಕಟ್ಟಡದ ಅಕ್ರಮ ನಿರ್ಮಾಣದ ಬಗ್ಗೆಯೂ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದು ಮಾಹಿತಿ ಕೋರಲಾಗಿದ್ದು, ನಿಯಮಬಾಹಿರವಾಗಿ ಕಟ್ಟಡ ನಿರ್ಮಿಸಿರುವುದು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.



