ಚಂದ್ರವಳ್ಳಿ ನ್ಯೂಸ್, ಶಿರಡಿ/ಪುಣೆ:
ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಕುಟುಂಬ ಸಮೇತರಾಗಿ ಮಹಾರಾಷ್ಟ್ರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ಶಿರಡಿಯ ಪವಿತ್ರ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಕುಟುಂಬದೊಂದಿಗೆ ಭೇಟಿ ನೀಡಿದ ಸಚಿವರು, ಭಗವಾನ್ ಶ್ರೀ ಸಾಯಿಬಾಬಾ ಅವರ ದಿವ್ಯ ದರ್ಶನ ಪಡೆದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ಅವರು, "ಗುರು ಸನ್ನಿಧಿ ಶಿರಡಿ ಕ್ಷೇತ್ರಕ್ಕೆ ಕುಟುಂಬ ಸಮೇತ ತೆರಳಿ ಬಾಬಾರವರ ದರ್ಶನ ಪಡೆಯುವ ಮಹಾಭಾಗ್ಯ ಲಭಿಸಿದೆ. ಸರ್ವರಿಗೂ ಶುಭವಾಗಲಿ ಹಾಗೂ ನಾಡಿನೆಲ್ಲಡೆ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಬಾಬಾ ಅವರಲ್ಲಿ ಅರಿಕೆ ಮಾಡಿಕೊಳ್ಳಲಾಗಿದೆ" ಎಂದು ತಿಳಿಸಿದರು.
ಇದೇ ವೇಳೆ ಪುಣೆಯಲ್ಲಿರುವ 'ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ' ಕೇಂದ್ರದ ಅಧಿಕೃತ ಭೇಟಿಗೂ ಮುನ್ನ, ಸಚಿವರು ಪ್ರಸಿದ್ಧ ಶ್ರೀ ಶ್ರೀಮಂತ್ ದಗ್ದುಶೇಠ್ ಹಲ್ವಾಯಿ ಗಣಪತಿ ಮಂದಿರಕ್ಕೆ ತೆರಳಿ ಮಹಾಗಣಪತಿಗೆ ಪೂಜೆ ಸಲ್ಲಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಹೆಚ್.ಡಿ.ಕೆ, ಪ್ರತಿಯೊಬ್ಬರಿಗೂ ಒಳಿತಾಗಲಿ ಹಾಗೂ ದೇಶದ ಮೂಲೆ ಮೂಲೆಗಳಲ್ಲೂ ಸುಖ-ಸಮೃದ್ಧಿ ನೆಲೆಸಲಿ ಎಂದು ವಿಘ್ನನಿವಾರಕ ಮಹಾಗಣಪತಿ ಸನ್ನಿಧಿಯಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದ್ದಾರೆ.




