
ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದ ಮಾಜಿ ಶಾಸಕ ಬಸವರಾಜ ಮಂಡಿಮಠ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
2023ರ ವಿಧಾನಸಭಾ ಚುನಾವಣೆ ಸಮೀಪವಾಗುತ್ತಿದ್ದರಂತೆ ಕೋಟೆ ನಾಡಿನಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದ್ದು ಚಳ್ಳಕೆರೆಯ ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಬಸವರಾಜ ಮಂಡಿಮಠ ಅವರು ಬಿಜೆಪಿ ತೊರೆದು ತಮ್ಮ ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಮಂಡಿಮಠ ಮಿಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾದ್ಯಕ್ಷ ಡಿ.ಯಶೋಧರ್, ಜೆಡಿಎಸ್ ಘೋಷಿತ ಅಭ್ಯರ್ಥಿ ರವೀಶ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಬಸವರಾಜ ಮಂಡಿಮಠ್ ಮಾತನಾಡಿ ಅಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದ ಜೆಡಿಎಸ್ ಅಭ್ಯರ್ಥಿ ರವೀಶ್ ಅವರನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಕರೆ ನೀಡಿದರು. ಜೆಡಿಎಸ್ ಅಭ್ಯರ್ಥಿ ರವೀಶ್ ಮಾತನಾಡಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಕಳೆದ ಚುನಾವಣೆಯಲ್ಲೇ ಚಳ್ಳಕೆರೆ ಕ್ಷೇತ್ರದಲ್ಲಿ ನಾನು ರಾಜಕೀಯ ಸಂಚಲನ ಉಂಟು ಮಾಡಿದ್ದೆ, ಈಗ ಮಂಡಿಮಠ್ ಅಂತಹ ಹಿರಿಯರು ಜೆಡಿಎಸ್ ಕಾರ್ಯಕ್ರಮಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಜೆಡಿಎಸ್ ಪಕ್ಷಕ್ಕೆ ಆನೆ ಬಲ ಬಂದತಾಗಿದೆ ಎಂದು ತಿಳಿಸಿದರು.
ಬಸವರಾಜ ಮಂಡಿಮಠ್ ಅವರು 1999ರಲ್ಲಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2013 ಮತ್ತು 2018ರಲ್ಲಿ ಎಸ್ಟಿ ಕ್ಷೇತ್ರವಾಗಿ ಮೀಸಲಾಗಿದ್ದರಿಂದಾಗಿ ರಘುಮೂರ್ತಿ ಅವರು ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದರು. ಈ ಬಾರಿ ನೂರಷ್ಟು ಜೆಡಿಎಸ್ ಗೆಲ್ಲಲಿದೆ ಎಂದು ಅವರು ತಿಳಿಸಿದರು.