i
ಒಂದೇ ಗ್ರಾಮದ 15-16 ವಯಸ್ಸಿನ ನಾಲ್ಕು ಮಕ್ಕಳು ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಶಿರಾ:
ಒಂದೇ ಗ್ರಾಮದ 4 ಮಕ್ಕಳು ನಾಪತ್ತೆಯಾಗಿದ್ದು ಗ್ರಾಮಸ್ಥರು ತೀವ್ರ ಆತಂಕದಲ್ಲಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಾಣಗೆರೆ ಗ್ರಾಮದ ನಾಲ್ವರು ಮಕ್ಕಳಾದ ಮಂಜುಳಾ, ಮಧು ಕುಮಾರ್, ಮಹಾಲಕ್ಷ್ಮಿ ಹಾಗೂ ಭಾನು ಕಣ್ಮರೆಯಾಗಿದ್ದು ಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ.
ಬೇಸಿಗೆ ರಜೆ ಇದ್ದು ಶನಿವಾರ ಮಧ್ಯಾಹ್ನ ನಾಲ್ಕು ಮಕ್ಕಳು ಆಟ ಆಡಲೆಂದು ಮನೆಯಿಂದ ಹೋದವರು ವಾಪಸ್ ಮನೆಗೆ ಬಂದಿಲ್ಲ. ಮಕ್ಕಳು ಎಷ್ಟೋತ್ತಾದರೂ ಮನೆಗೆ ಬಂದಿಲ್ಲ ಎಂದು ಗಾಬರಿಗೊಂಡ ಪೋಷಕರು ಊರೆಲ್ಲಾ ಹುಡುಕಿದರೂ ಮಕ್ಕಳು ಸಿಗದ ಕಾರಣ ಪೋಷಕರು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಪತ್ತೆಯಾಗಿರುವ ಎಲ್ಲರೂ 15-16 ವರ್ಷದ ವಯಸ್ಸಿನವರಾಗಿದ್ದಾರೆ. ಒಂದೇ ವಯಸ್ಸಿನ ಅಂತರವಿರುವ 4 ಮಕ್ಕಳು ನಾಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆ ಸಂಬಂಧ ತನಿಖೆ ಚುರುಕು ಗೊಳಿಸಿದ್ದಾರೆ.
ನಾಪತ್ತೆಯಾದ ಮಕ್ಕಳ ಪೈಕಿ ಮಂಜುಳಾ-ಮಧು ಕುಮಾರ್ ಅವಳಿ ಮಕ್ಕಳು. ಮಕ್ಕಳು ಊರಿಯಿಂದ ಸೀದಾ ಬೆಂಗಳೂರಿಗೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಬೆಂಗಳೂರಿಗೆ ಯಾಕೆ ಹೋದರೂ ಯಾರು ಇವರನ್ನು ಕರೆಸಿಕೊಂಡರೆಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಶೋಧ ನಡೆಸುತ್ತಿದ್ದು, ಮಕ್ಕಳು ಸಿಕ್ಕ ಬಳಿಕವಷ್ಟೇ ಸತ್ಯ ಹೊರಬರುವ ಸಾಧ್ಯತೆ ಇದೆ. ಶಿರಾ ಶಾಸಕ ಟಿ ಬಿ ಜಯಚಂದ್ರ ಅವರು ಘಟನೆ ಸಂಬಂಧ ಪ್ರತಿಕ್ರಿಯಿಸಿ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಅವರು ತಿಳಿಸಿದ್ದಾರೆ.
ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ಹಾಸನದಲ್ಲಿದ್ದ ನಾಲ್ಕು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.