i
ಪುತ್ರಿಗೆ ಅಧಿಕಾರ ಹಸ್ತಾಂತರಿಸಿದ ತಂದೆ, ಅಪ್ಪ ಮಗಳ ಆ ಭಾವುಕ ಕ್ಷಣಗಳು…
ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಜನ್ಮ ನೀಡಿದ ತಂದೆಯಿಂದಲೇ ಅಧಿಕಾರ ಹಸ್ತಾಂತರಿಸಿಕೊಳ್ಳುವ ಆ ಕ್ಷಣಗಳು ನಿಜಕ್ಕೂ ಭಾವುಕ. ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಂದೆಗೆ ವರ್ಗಾವಣೆ ಆಗಿತ್ತು. ಅದೇ ಜಾಗಕ್ಕೆ ಪುತ್ರಿ ಆಗಮಿಸಿದ್ದರು.
ತಂದೆ ಕೈಯಿಂದಲೇ ಅಧಿಕಾರ ಸ್ವೀಕರಿಸಿದ ಪುತ್ರಿಗೆ ಆ ಭಾವುಕ ಕ್ಷಣಗಳನ್ನು ಮರೆಯಲು ಸಾಧ್ಯವೇ ಇಲ್ಲ. ಇದೆಲ್ಲೋ ನಡೆದಿದ್ದು ದೇಶದ ಯಾವುದೇ ಭಾಗದಲಲ್ಲ, ಮಂಡ್ಯದ ಪೊಲೀಸ್ ಠಾಣೆಯಲ್ಲೇ ಇದು ನಡೆದಿರುವುದು ಇನ್ನೂ ವಿಶೇಷ.
ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಬಂದ ಮಗಳು, ತಂದೆಯ ಕೈಯಿಂದಲೇ ಅಧಿಕಾರ ಸ್ವೀಕರಿಸಿ ಧನ್ಯತಾ ಭಾವವನ್ನು ತಂದೆಗೆ ಅರ್ಪಿಸಿದಳು ಪುತ್ರಿ. ಬ್ಯಾಟನ್ ನೀಡಿ ಅಧಿಕಾರ ಹಸ್ತಾಂತರಿಸಿದ ತಂದೆ ಇಂತಹ ದೊಂದು ಅಪರೂಪದ ಘಟನೆಗೆ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಸಾಕ್ಷಿಯಾಗಿದೆ. ಸೆಂಟ್ರಲ್ ಠಾಣೆಯಲ್ಲಿ ವೆಂಕಟೇಶ್ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅದೇ ಜಾಗಕ್ಕೆ ಪುತ್ರಿ ವರ್ಷ ಪಿಎಸ್ಐ ಆಗಿ ಬಂದಿದ್ದು, ಅಧಿಕಾರ ಸ್ವೀಕರಿಸಿದ ಪುತ್ರಿ ವರ್ಷಾಗೆ ತಂದೆ ವೆಂಕಟೇಶ್ ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ.
ಸೇನೆಯಿಂದ ನಿವೃತ್ತಿ ಪಡೆದ ಬಳಿಕ 2010ರಲ್ಲಿ ಪಿಎಸ್ಐ ಪರೀಕ್ಷೆ ಬರೆದು ಪೊಲೀಸ್ ಇಲಾಖೆಗೆ ಸೇನಾ ಕೋಟದಡಿ ವೆಂಕಟೇಶ್ ನೇಮಕಗೊಂಡಿದ್ದರು. ಕಳೆದೊಂದು ವರ್ಷದಿಂದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ವೆಂಕಟೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ವೆಂಕಟೇಶ್ ಪುತ್ರಿ ಬಿ.ವಿ ವರ್ಷ 2022 ರ ಬ್ಯಾಚ್ನ ಪಿಎಸ್ಐ ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದರು. ಕಳೆದ ಒಂದು ವರ್ಷದಿಂದ ಪ್ರೊಬೆಷನರಿ ಪಿಎಸ್ಐ ಆಗಿ ವರ್ಷಾ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಅಧಿಕಾರ ಸ್ವೀಕರಿಸುವ ಮೂಲಕ ತಂದೆ ಮಗಳು ಎಲ್ಲರ ಗಮನ ಸೆಳೆದಿದ್ದಾರೆ.