i
ಬರಗಾಲ ಘೋಷಣೆ ಬಗ್ಗೆ ತೀರ್ಮಾನಿಸಲು ಜುಲೈ-15 ರಂದು ಸಭೆ-ಸಚಿವ ಪ್ರಿಯಾಂಕ ಖರ್ಗೆ…
ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಅಭಾವದಿಂದಾಗಿ ಉಂಟಾಗಿರುವ ಪರಿಸ್ಥಿತಿ ನಿಭಾಯಿಸಲು ಕಂದಾಯ ಸಚಿವ ಕೃಷ್ಣ ಭೈರೆಗೌಡ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿದ್ದು ಜುಲೈ 15ರಂದು ಬರಗಾಲ ಘೋಷಣೆ ಕುರಿತು ಸಭೆ ನಡೆಯಲಿದ್ದು ಸಭೆಯಲ್ಲಿ ಬರಗಾಲ ಘೋಷಣೆ ಮಾಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಲಬುರಗಿ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಕೊರತೆ ಇದೆ. ಹಾಗಂತ ಮೋಡ ಬಿತ್ತನೆ ಕಾರ್ಯ ಕೂಡಾ ಸರ್ಕಾರದ ಮುಂದಿಲ್ಲ. ಮಳೆ 10 ದಿನ ತಡವಾಗಿದ್ದು, ಮುಂದಿನ ಮೂರ್ನಾಲ್ಕು ದಿನದಲ್ಲಿ ಮಳೆ ಬರುವ ಸಾಧ್ಯತೆವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಕಾದು ನೋಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಪ್ರಸ್ತುತ ಕಲಬುರಗಿ, ಬೀದರ, ಯಾದಗಿರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಜಿಲ್ಲೆಗಳಿಗೆ ತಲಾ 1 ಕೋಟಿ ರೂ. ಅನುದಾನ ನೀಡಲಾಗಿದೆ. ಇದಲ್ಲದೆ ಹೆಚ್ಚುವರಿ ಅನುದಾನ ಬೇಕಿದಲ್ಲಿ ಸರ್ಕಾರ ನೀಡಲಿದೆ ಎಂದು ಹೇಳಿದರು.
ಮಳೆಗಾಲ ಹಿನ್ನೆಲೆಯಲ್ಲಿ ಕಲಬುರಗಿ ನಗರದ ತಗ್ಗು ಪ್ರದೇಶಗಳಿಗೆ ಮಳೆ ನೀರು, ಚರಂಡಿ ನೀರು ನುಗ್ಗದಂತೆ ನಗರದಲ್ಲಿ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಹಿಂದಿನ ಸರ್ಕಾರದಲ್ಲಿ ಕಲಬುರಗಿ ನಗರದ ಅಪ್ಪನ ಕೆರೆ ಸೌಂದರ್ಯೀಕರಣಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪರಿಸರ ಪ್ರಭಾವದ ಮೌಲ್ಯಮಾಪನ ವರದಿ ಪಡೆಯದೇ ಕಾಮಗಾರಿ ಆರಂಭಿಸಿದ್ದು, ಅಲ್ಲಿನ ಪಕ್ಷಿ ಸಂಕುಲಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಇದು ದ್ವೇಷದ ರಾಜಕಾರಣ ಅಲ್ಲ. ಪರಿಸರ ಕಾಳಜಿ ಮತ್ತು ನಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಸೂಚನೆ ನೀಡಿರುವೆ. ಪರಿಸರ ಪ್ರಭಾವ ಮೌಲ್ಯಮಾಪನ ವರದಿ ಬಂದ ನಂತರ ಕಾಮಗಾರಿ ಮುಂದುವರೆಸುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.