
ಗ್ರಾಮ ಪಂಚಾಯಿತಿಗಳ ಮೂಲಕ ಸ್ವಂತ ಹಣದಲ್ಲಿ ರೈತರು ಮತ್ತು ಗ್ರಾಪಂ ಸದಸ್ಯರುಗಳಿಗೆ ಸೇವೆ-ಬಿ.ಸೋಮಶೇಖರ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಮ ಮಟ್ಟದಲ್ಲೇ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಅನುಕೂಲವಾಗುವಂತೆ ಸ್ವಂತ ಹಣದಿಂದಲೇ ಅತಗ್ಯ ಯಂತ್ರೋಪಕರಣಗಳನ್ನು ಒದಗಿಸಿ ಆ ಮೂಲಕ ರೈತರ ಆರ್ಥಿಕ ಹೊರೆ ತಗ್ಗಿಸಲು ಮುಂದಾಗಿರುವ ಕಾಂಗ್ರೆಸ್ ಮುಖಂಡ ಹಾಗೂ ಹಿರಿಯೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಬಿ.ಸೋಮಶೇಖರ್ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೃಷಿ ಯಂತ್ರೋಪಕರಣಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗಳ ಸದಸ್ಯರುಗಳೇ ಮಾಡಬೇಕಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿ 30 ಲಕ್ಷ ರೂ.ಗಳಂತೆ ಹಿರಿಯೂರು ತಾಲೂಕಿನ 31 ಗ್ರಾಮ ಪಂಚಾಯಿತಿಗಳಿಗೆ ಆರ್ಥಿಕ ನೆರವು ನೀಡಲು ಸೋಮಶೇಖರ್ ಚಾಲನೆ ನೀಡಿದ್ದಾರೆ.
ಇಷ್ಟೇಲ್ಲ ಮಾಡುತ್ತಿರುವ ಈ ಸೋಮಶೇಖರ್ ಯಾರೆಂದು ನಿಮಗೆ ಕಾಡಬಹುದು. ಚಿತ್ರದುರ್ಗ-ದಾವಣಗೆರೆ ಸ್ಥಳೀಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಸೋಲುಂಡವರು ಹಾಗೂ ಇತ್ತೀಚೆಗೆ ಹಿರಿಯೂರು ತಾಲೂಕಿನ ಧರ್ಮಪುರದಲ್ಲಿ ಕಾಂಗ್ರೆಸ್ ಸಭೆಯಲ್ಲಿ ಮಾಜಿ ಸಚಿವ ಡಿ.ಸುಧಾಕರ್ ಅವರ ಬೆಂಬಲಿಗರಿಂದ ನೋವು ಅನುಭವಿಸಿದ ವ್ಯಕ್ತಿಯೇ ಈ ಸೋಮಶೇಖರ್ ಎನ್ನುವುದು ಮುಖ್ಯ.
ಇದಲ್ಲದೆ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಗುತ್ತಿಗೆ ಮಾಡುವಂತವರಿಗೆ ಬಡ್ಡಿ ರಹಿತವಾಗಿ 5 ಲಕ್ಷ ರೂ.ಗಳನ್ನು ನೀಡಲು ಸೋಮಶೇಖರ್ ಮುಂದಾಗಿದ್ದು ಗುತ್ತಿಗೆ ಕಾಮಗಾರಿಯ ಬಿಲ್ ಪಡೆದ ನಂತರ ಕಾಮಗಾರಿ ಪೂರ್ಣಗೊಳಿಸಲು ನೀಡಲಾಗಿದ್ದ ಬಡ್ಡಿ ರಹಿತವಾದ 5 ಲಕ್ಷ ರೂ.ಗಳನ್ನು ಪಡೆದವರು ವಾಪಸ್ ನೀಡಬೇಕಾಗುತ್ತದೆ. ಇಂಥದೊಂದು ಯೋಜನೆ ರೂಪಿಸುವ ಮೂಲಕ ಸೋಮಶೇಖರ್ ಮನೆ ಮಾತಾಗಿದ್ದಾರೆ.
ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸದಸ್ಯರುಗಳಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಸೋಮಶೇಖರ್ ಅವರು ಕೈಗೊಳ್ಳುವ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿ, ನಾನು ಸುಳ್ಳು ಹೇಳಿ ರಾಜಕಾರಣ ಮಾಡಲು ಬಂದಿಲ್ಲ, ಸುಳ್ಳು ಹೇಳಿ ರಾಜಕಾರಣ ಮಾಡಿದ್ದರೆ ಸಾವಿರಾರು ಮತಗಳ ಅಂತರದಿಂದ ಗೆದ್ದು ವಿಧಾನ ಪರಿಷತ್ ಸದಸ್ಯ ಆಗುತ್ತಿದೆ ಎಂದು ತಿಳಿಸಿದರು.
ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಹುದ್ದೆಗಳನ್ನು ನಿರ್ವಹಿಸಿರುವ ಅನುಭವವಿದೆ. ಅಲ್ಲದೆ ಗ್ರಾಮ ಪಂಚಾಯ್ತಿ ಸದಸ್ಯನಾಗಿ, ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಗ್ರಾಮ ಪಂಚಾಯ್ತಿ ಸದಸ್ಯರುಗಳು ಅನುಭವಿಸುವ ಕಷ್ಟ ಗೊತ್ತಿದೆ. ಗ್ರಾಮದಲ್ಲಿ ಸಮಸ್ಯೆಗಳ ಅರಿವಿದೆ. ನನ್ನ ಸ್ವಂತ ಹಣದಲ್ಲಿ ಪ್ರತಿ ಗ್ರಾಪಂಗಳಿಗೆ ನೀಡುತ್ತೇನೆ. ಅಭಿವೃದ್ಧಿ ಅಧಿಕಾರಿಗಳ ಜೊತೆ ಗೊಂದಲ ಮಾಡಿಕೊಳ್ಳದೆ ಪಕ್ಷತೀತವಾಗಿ ಗ್ರಾಪಂಗಳ ಅಭಿವೃದ್ಧಿಗೆ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಗ್ರಾಪಂ ಸದಸ್ಯರು ಸೇರಿದಂತೆ ರೈತರು ಆರ್ಥಿಕವಾಗಿ ಸದೃಢರಾಗಬೇಕು. ನಾನು ಸದಾ ನಿಮ್ಮ ಜೊತೆಯಿರುತ್ತೇನೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ ಪರಮೇಶ್ವರ್ ರಂತಹ ಹಿರಿಯರು ನನ್ನ ಬೆನ್ನಿಗಿದ್ದು ಆಶೀರ್ವಾದ ಮಾಡಿದ್ದಾರೆ. ನಾನು ಸಹ ಪ್ರಬಲ ಆಕಾoಕ್ಷಿಯಾಗಿದ್ದೇನೆ. ಸೇವೆ ಮಾಡುವ ಉದ್ದೇಶದಿಂದ ರಾಜಕಾರಣ ಮಾಡುವವನು ನಾನು. ನಿಮ್ಮ ಬೆಂಬಲ ಮತ್ತು ಸಹಕಾರ ನನ್ನ ಮೇಲಿರಲಿ ಎಂದು ಸೋಮಶೇಖರ್ ಮನಿ ಮಾಡಿದರು.
ಆದಿ ಜಾoಬವ ಮಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಮಾತನಾಡಿ, ಕಾಂಗ್ರೆಸ್ ಮುಖಂಡ ಸೋಮಶೇಖರ್ ಸ್ನೇಹಪೂರ್ವಕವಾಗಿ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ನಾನು ರಾಜಕೀಯ ಮಾಡಲು ಬಂದಿಲ್ಲ, ಆತ್ಮೀಯತೆಗೆ ಗೌರವ ನೀಡಿ ಬಂದಿದ್ದೇನೆ. ಸ್ನೇಹಕ್ಕೆ ಯಾರ ಅಪ್ಪಣೆ ಬೇಕಿಲ್ಲ. ಸಜ್ಜನಿಕೆಯ ರಾಜಕಾರಣಿ ಸೋಮಶೇಖರ್ ಅವರ ನಡೆ ನುಡಿ ಅತ್ಯಂತ ಸರಳವಾಗಿದೆ. ರಾಜಕಾರಣಿಗಳ ಗತ್ತು ಅವರಲ್ಲಿಲ್ಲ, ಇಂಥಹ ನಾಯಕರನ್ನು ನಾವು ಬೆಂಬಲಿಸಬೇಕಾಗುತ್ತದೆ. ಸೋಮಶೇಖರ್ ದೇಸಿಯವಾಗಿ ಬದುಕುವ ವ್ಯಕ್ತಿ. ರಾಜಕಾರಣ ಸೇವೆಗಾಗಿ ಇರುವುದು ಎನ್ನುವಂತಹ ವ್ಯಕ್ತಿತ್ವದವರು ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಸೋಮಶೇಖರ್ ಅವರು ಹಿರಿಯೂರು ತಾಲೂಕಿನ ಸಮಸ್ಯೆಗಳ ನಿವಾರಣೆಗೆ ಪ್ರಮಾಣಿಕವಾಗಿ ಶ್ರಮಿಸಬೇಕು. ಪುನಶ್ಚೇತನವಾಗುವಂತಹ ಉದ್ದಿಮೆಗಳನ್ನು ಇಲ್ಲಿ ಪ್ರಾರಂಭಿಸಬೇಕು. ಸೋಮಶೇಖರ್ ಬಿಟ್ಟು ಓಡಿ ಹೋಗುವ ರಾಜಕಾರಣಿಯಲ್ಲ ಎಂಬುದು ಸಾಬೀತಾಗಿದೆ. ಅವರಿಂದ ಜನರಿಗೆ, ಜನರಿಂದ ಅವರಿಗೆ ಒಳ್ಳೆಯದಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಡರಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಶ್ಮಿ ಮಂಜುನಾಥ್, ಸುಮಿತ್ರಮ್ಮ ಓಬಳೇಶ್, ಶಿವಮೂರ್ತಿ, ರಂಗಮ್ಮ, ನೇತ್ರಾವತಿ, ಸತ್ಯಭಾಮ, ಹನುಮಂತರಾಯ, ರವೀಶ್, ರಾಧಮ್ಮ ಉದಯಶಂಕರ್, ಮಹಲಿಂಗಪ್ಪ, ಓಬಳೇಶ್, ಕೃಷ್ಣಪ್ಪ, ಕಾಂತಪ್ಪ ಸೇರಿದಂತೆ ಸಾಕಷ್ಟು ಮಂದಿ ಹಾಜರಿದ್ದರು.