i
ಲೋಕಸಭಾ ಸಾರ್ವತ್ರಿಕ ಚುನಾವಣೆಗಾಗಿ ರಜೆ ಘೋಷಣೆ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಭಾರತ ಚುನಾವಣಾ ಆಯೋಗವು ಲೋಕಸಭೆಗೆ ಸಾರ್ವತ್ರಿಕ ಚುನಾವಣೆ-೨೦೨೪ ಘೋಷಿಸಿದ್ದು, ಅದರಂತೆ ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ತುಮಕೂರು ಲೋಕಸಭಾ ಕ್ಷೇತ್ರ ಒಳಗೊಂಡಂತೆ ೧೪ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ ೨೬, ೨೦೨೪ರ ಶುಕ್ರವಾರದಂದು ಮತದಾನ ನಡೆಯಲಿದ್ದು, ಸದರಿ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವಂತಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಚುನಾವಣಾ ಕ್ಷೇತ್ರಗಳಿಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
ಆಯಾ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ-ಕಾಲೇಜುಗಳಿಗೆ(ಅನುದಾನಿತ ಶಿಕ್ಷಣ ಸಂಸ್ಥೆಯೂ ಒಳಗೊಂಡಂತೆ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೂ ಒಳಗೊಂಡಂತೆ) ದಿನಾಂಕ:೨೬-೪-೨೦೨೪ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿರುತ್ತದೆ. ಲೋಕಸಭಾ ಕ್ಷೇತ್ರಗಳ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ ೧೯೫೧ ಕಲಂ ೧೩೫ಬಿ ಅಡಿ ಎಲ್ಲಾ ಉಪಬಂಧಗಳಿಗೊಳಪಟ್ಟು ವೇತನ ಸಹಿತ ರಜೆ ನೀಡಲು ಆದೇಶಿಸಲಾಗಿದೆ.
ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುವುದು.